-
ಪುಸ್ತಕದ ಹೆಸರು:
ಜಾತಕತಿಲಕ
-
ಲೇಖಕನ ಹೆಸರು:
ಶ್ರೀಧರಾಚಾರ್ಯ
-
ಕಾಲ:
ಕ್ರಿ.ಶ. 1049
-
ವಸ್ತು:
ಜ್ಯೋತಿಷ್ಯ ಶಾಸ್ತ್ರ
-
ಪರಿಚಯ:
‘ಜಾತಕತಿಲಕ’ವು, ಜ್ಯೋತಿಷ್ಯಶಾಸ್ತ್ರವನ್ನು
ಕುರಿತಂತೆ, ಕನ್ನಡದಲ್ಲಿ ಬಂದಿರುವ ಮೊಟ್ಟಮೊದಲ ಕೃತಿ. ಇದನ್ನು ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯ
ನರಗುಂದದಲ್ಲಿ ಜೀವಿಸಿದ್ದ ಶ್ರೀಧರಾಚಾರ್ಯನೆಂಬ ವಿದ್ವಾಂಸನು ರಚಿಸಿದ್ದಾನೆ. ಆಗ ಚಾಲುಕ್ಯ ರಾಜನಾದ
ಆಹವಮಲ್ಲ ಸೋಮೇಶ್ವರನು(ಕ್ರಿ.ಶ.1042-1068) ರಾಜ್ಯಭಾರ ಮಾಡುತ್ತಿದ್ದನು. ತಾನು
‘ಚಂದ್ರಪ್ರಭಪುರಾಣ’ವೆಂಬ ಇನ್ನೊಂದು
ಕೃತಿಯನ್ನು ರಚಿಸಿರುವುದಾಗಿ ಶ್ರೀಧರಾಚಾರ್ಯನು ಹೇಳಿಕೊಳ್ಳುತ್ತಾನೆ. ಅದು ಇನ್ನೂ ಸಿಕ್ಕಿಲ್ಲ. ಅವನಿಗೆ
ಬುಧಮಿತ್ರ ಮತ್ತು ಗದ್ಯಪದ್ಯವಿದ್ಯಾಧರ ಎಂಬ ಬಿರುದುಗಳಿದ್ದವು.
‘ಜಾತಕತಿಲಕ’ವು ಕಂದಪದ್ಯಗಳು
ಮತ್ತು ವೃತ್ತಗಳನ್ನು ಬಳಸಿ ಸಿದ್ಧವಾಗಿರುವ ಚಂಪೂ ಕೃತಿ. ಅದರಲ್ಲಿ ಇಪ್ಪತ್ನಾಲ್ಕು ಅಧ್ಯಾಯಗಳಿವೆ.
ಅವು ಅನುಕ್ರಮವಾಗಿ, ಸಂಜ್ಞಾ, ಬಲಾಬಲ, ಗರ್ಭಾದಾನ, ಜನ್ಮ, ತಿರ್ಯಗ್ಜನ್ಮ,(ವಿಯೋನಿ ಜನ್ಮ) ಅರಿಷ್ಟ,
ಅರಿಷ್ಟಭಂಗ, ಆಯುರ್ದಾಯ, ದಶಾಂತರ್ದಶಾ, ಆಷ್ಟಕವರ್ಗ, ಜೀವ, ರಾಜಯೋಗ, ನಾಭಿಸಂಯೋಗ, ಚಂದ್ರಯೋಗ, ದ್ವಿತ್ರಿಯೋಗ,
ದೀಕ್ಷಾಯೋಗ, ರಾಶಿಶೀಲ, ಲಗ್ನಭಾವ, ದ್ರೇಕ್ಕಾಣ, ದೃಷ್ಟ, ಅನಿಷ್ಠಯೋಗ, ಸ್ತ್ರೀಜಾತಕಫಲ, ನಿರ್ಯಾಣ
ಮತ್ತು ನಷ್ಟಜಾತಕ ಎಂಬ ಶೀರ್ಷಿಕೆಗಳನ್ನು ಪಡೆದಿವೆ. ಜ್ಯೋತಿಷ್ಯಶಾಸ್ತ್ರದಲ್ಲಿ ಆಸಕ್ತರಾದವರಿಗೆ,
ಈ ಪುಸ್ತಕವು ಮಾಹಿತಿಗಳ ಗಣಿಯೆಂಬ ಸಂಗತಿಯು ಸ್ಪಷ್ಟವಾಗಿಯೇ ಇದೆ. ತನ್ನ ಕೃತಿಯ ವ್ಯಾಪ್ತಿ ಮತ್ತು
ಖಚಿತತೆಗಳನ್ನು ಕುರಿತು ಲೇಖಕನು ಹೆಮ್ಮೆ ಪಡುತ್ತಾನೆ. ದೀರ್ಘಾಯುಷ್ಯ, ಶೈಶವದಲ್ಲೇ ಮರಣ ಮುಂತಾದ ಘಟನೆಗಳಿಗೆ
ಕಾರಣವಾಗುವ ನಕ್ಷತ್ರಸಂಯೋಜನೆಗಳನ್ನು ಇಲ್ಲಿ ಕೊಡಲಾಗಿದೆ. ಜನ್ಮನಕ್ಷತ್ರವನ್ನು ಕಂಡುಹಿಡಿಯುವ ವಿಧಾನವನ್ನೂ
ಇಲ್ಲಿ ವಿವರಿಸಲಾಗಿದೆ. ಅನೇಕ ಬಾರಿ, ಈ ಲೇಖಕನು ಸಂಸ್ಕೃತದ ಪ್ರಸಿದ್ಧ ಗ್ರಂಥಗಳಾದ ವರಾಹಮಿಹಿರನ
‘ಬೃಹಜ್ಜಾತಕ’ ಮತ್ತು
‘ಲಘುಜಾತಕ’, ಅಂತೆಯೇ ಕಲ್ಯಾಣವರ್ಮನ
‘ಸಾರಾವಳಿ’ ಮುಂತಾದ ಕೃತಿಗಳಲ್ಲಿರುವ
ಶ್ಲೋಕಗಳನ್ನು ಮಕ್ಕಿ ಕಾಮಕ್ಕಿ, ಕನ್ನಡಕ್ಕೆ ಅನುವಾದಿಸಿದ್ದಾನೆ. ಆ ಋಣವನ್ನು ಎಲ್ಲಿಯೂ ಹೇಳಿಕೊಂಡಿಲ್ಲ.
ತನ್ನ ಕೃತಿಯು ಇತರ ಯಾವುದೇ ಶಾಸ್ತ್ರವನ್ನು ಅವಲಂಬಿಸಿಲ್ಲವೆಂದು ಶ್ರೀಧರಾಚಾರ್ಯನು ಹೇಳಿಕೊಳ್ಳುತ್ತಾನೆ.(ಅನ್ಯಶಾಸ್ತ್ರ
ನಿರಪೇಕ್ಷಂ) ಏನೇ ಆದರೂ ಇದು ಈ ಕ್ಷೇತ್ರದಲ್ಲಿ ಮೊದಲ ಕೃತಿ ಮತ್ತು ಮಹತ್ವದ ಕೃತಿ.
-
ಪ್ರಕಟಣೆಯ ಇತಿಹಾಸ:
ಅ. ‘ಜಾತಕತಿಲಕ’, ಸಂ. ಎಂ. ಮರಿಯಪ್ಪ ಭಟ್ಟ ಮತ್ತು ಎಂ. ಗೋವಿಂದರಾವ್, 1955, ಮದ್ರಾಸು
ಆ. ‘ಶ್ರೀಧರಾಚಾರ್ಯನ ಜಾತಕತಿಲಕ’,
ಸಂ. ಎಸ್.ಎನ್. ಕೃಷ್ಣ ಜೋಯಿಸರು, 1959, ಕನ್ನಡ
ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು. (ಮರುಮುದ್ರಣ
1977, 2003)
-
ಮುಂದಿನ ಓದು ಮತ್ತು ಲಿಂಕುಗಳು:
ಅ.
Jyotish & Sastras - [
Translate this page ]
-
ಅನುವಾದ: